ಮನೋರಮ -

	1. ನಿಷಧ ದೇಶದ ರಾಜ ವೀರಸೇನನ ಮಗಳು. ಇಕ್ಷ್ವಾಕು ವಂಶದ ರಾಜ ಧ್ರುವ ಸಂಧಿಯ ಎರಡನೆಯ ಹೆಂಡತಿ. ಸುದರ್ಶನನ ತಾಯಿ ಧ್ರುವ ಸಂಧಿಯ ಹಿರಿಯ ಹೆಂಡತಿ ಲೀಲಾವತಿ, ಇವಳ ಮಗಳು ಶತ್ರುಜಿತ. ಕಾಲಾಂತರದಲ್ಲಿ ಧ್ರುವ ಸಂಧಿ ತನ್ನ ಹಿರಿ ಹೆಂಡತಿಯ ಮಗ ಶತ್ರುಜಿತನಿಗೆ ಪಟ್ಟ ಕಟ್ಟಲು ಯೋಚಿಸಿದಾಗ ಮನೋರಮ ತನ್ನ ಮಗ ಸುದರ್ಶನನಿಗೆ ಪಟ್ಟ ಕಟ್ಟಬೇಕೆಂದು ತಂದೆ ವೀರಸೇನನ ಮೂಲಕ ಹೇಳಿ ಕಳಿಸಿದಳು. ಧ್ರುವಸಂಧಿಗೂ ವೀರಸೇನನಿಗೂ ಯುದ್ಧ ನಡೆದು ಅದರಲ್ಲಿ ವೀರಸೇನ ಮರಣವಪ್ಪಿದ. ಹೀಗೆ ಭಗ್ನಮನೋರಥಳಾದ ಮನೋರಮ ಮಗನೊಂದಿಗೆ ಭರದ್ವಾಜಾಶ್ರಮಕ್ಕೆ ಹೋದಳು (ದೇವೀ ಭಾಗವತ) 

2. ನಾಗರಾಜರಲ್ಲಿ ಒಬ್ಬನಾದ ಕಪೋತಕ ಅಥವಾ ಸಾಲಕಪೋತಕ ಎಂಬುವನ ಹೆಂಡತಿ. ಇವಳ ಮಗಳು ನಂದಾ. ಸಾಲಕಪೋತಕ ಒಮ್ಮೆ ಅರಣ್ಯದಲ್ಲಿ ಸಂಚರಿಸುವಾಗ ಉತ್ತಮ ಅಥವಾ ಸುಶರ್ಮನ ರಾಣಿ ಬಹುಳೆಯೆಂಬವಳನ್ನು ಕಂಡು ಮೋಹಪರವಶನಾಗಿ ಆಕೆಯನ್ನು ಜೊತೆಯಲ್ಲಿ ಕರೆತಂದ. ನಂದೆ ಅವಳನ್ನು ನೋಡಿ ತನ್ನ ತಾಯಿಗೆ ಸವತಿಯಾಗುವಳೆಂಬ ಭಯದಿಂದ ಬಹುಳೆಯನ್ನು ತನ್ನ ತಂದೆಗೆ ತಿಳಿಯದಂತೆ ಬಚ್ಚಿಟ್ಟಳು. ಕಪೋತಕ ಎಷ್ಟು ವಿಧವಾಗಿ ಬೇಡಿಕೊಂಡರೂ ಹೇಳಲಿಲ್ಲ. ಕಪೋತಕ ಕೋಪಾವೇಶದಿಂದ ತನ್ನ ಮಗಳು ನಂದೆಗೆ ಮೂಗಿಯಾಗುವಂತೆ ಶಾಪಕೊಟ್ಟ. ಅಷ್ಟರಲ್ಲಿ ಬಹುಳೆಯ ಪತಿಯಾದ ಸುಶರ್ಮ ಬಲಾಕನೆಂಬ ರಾಕ್ಷಸನ ಸಹಾಯದಿಂದ ತನ್ನ ಹೆಂಡತಿಯನ್ನು ತನ್ನಲ್ಲಿಗೆ ಬರಮಾಡಿಕೊಂಡ. ನಂದೆಯ ಉಪಕಾರಕ್ಕೆ ಪ್ರತಿಯಾಗಿ ಸುಶರ್ಮ ಸಾರಸ್ವತಕ್ರತುವನ್ನು ಮಾಡಿಸಿ, ನಂದೆಯ ಮೂಕತ್ವವನ್ನು ಹೋಗಲಾಡಿಸಿದ. ಬಹುಳೆಯ ಮೂಲಕ ತನ್ನ ಮೂಕತ್ವ ಹೋಗಿದ್ದೆಂಬ ವಿಷಯವನ್ನು ಗರ್ಗಮುನಿಯಿಂದ ತಿಳಿದು ಸಂತುಷ್ಟೆಯಾದ ನಂದೆ ಬಹುಳೆಯಲ್ಲಿಗೆ ಬಂದು ತನ್ನ ಕೃತಜ್ಞತೆ ಹೇಳಿ ಪಾತಾಳಕ್ಕೆ ಹಿಂತಿರುಗಿದಳು (ಮಾರ್ಕಂಡೇಯಾಪುರಾಣ)

3. ಇಂದೀವರಾಕ್ಷನೆಂಬ ಗಂಧರ್ವ ರಾಜನ ಮಗಳು. ಪಾರನೆಂಬ ಮುನಿಯಿಂದ ಪುಂಜಿಕಸ್ಥಲೆಯೆಂಬ ಅಪ್ಸರಸಿಯಲ್ಲಿ ಜನಿಸಿದ ಕಲಾವತಿಗೂ ಮಂದರನೆಂಬ ವಿದ್ಯಾಧಿ ರಾಜನ ಮಗಳು ವಿಭಾವರಿಗೂ ಈಕೆಯ ಗೆಳತನವಿತ್ತು. ಈ ಮೂವರು ಒಮ್ಮೆ ಹಿಮವತ್ಪರ್ವತದಲ್ಲಿ ವಿಹರಿಸುತ್ತಿದ್ದಾಗ, ಉಗ್ರನಿಯಮವನ್ನು ಕೈಗೊಂಡಿದ್ದ ಮುದಿತಪಸ್ವಿಯೊಬ್ಬನನ್ನು ಕಂಡು ಮನೋರಮೆ ಪರಿಹಾಸ್ಯ ಮಾಡಿದಳು; ಕುಪಿತನಾದ ಮುನಿ ನೀನು ರಾಕ್ಷಸರ ಬಾಧೆಗೊಳಗಾಗು ಎಂದು ಶಾಪವಿತ್ತ. ಬ್ರಾಹ್ಮಣರು ಶಾಂತ ಸ್ವಭಾವದವರಾದರು. ಈ ರೀತಿ ಕೋಪಗೊಳ್ಳಬಹುದೆ? ಎಂದು ಸಖಿಯರಿಬ್ಬರೂ ಅವನನ್ನು ಮೂದಲಿಸಿದರು. ಮತ್ತಷ್ಟು ಸಿಟ್ಟಿಗೆದ್ದ ಮುನಿ ಅವರಿಬ್ಬರಲ್ಲಿ ಒಬ್ಬಳು ಕುಷ್ಠರೋಗಿಯಾಗೆಂದೂ ಮತ್ತೊಬ್ಬಳು ಕ್ಷಯರೋಗಿಯಾಗೆಂದೂ ಶಾಪವಿತ್ತ. ಅಷ್ಟರಲ್ಲಿ ಸ್ವರೋಚಿಯೆಂಬ ಆಯುರ್ವೇದ ವ್ಯೆದ್ಯ ಅಲ್ಲಿಗೆ ಬಂದು ಮನೋರಮೆಯನ್ನು ರಾಕ್ಷಸಬಾಧೆಯಿಂದ ಬಿಡಿಸಿದಲ್ಲದೆ ಈಕೆಯ ಸಖಿಯರನ್ನು ತನ್ನ ಆಯುರ್ವೇದ ವಿದ್ಯೆಯಿಂದ ಗುಣಪಡಿಸಿ ಮೂವರನ್ನೂ ಮದುವೆಯಾದ.
(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ